ತಾಳೇಶಪತ್ರೆ -
ಪೈನ್ ಮರದ ಕುಟುಂಬಕ್ಕೆ (ಪೈನೇಸೀ) ಸೇರಿದ ಒಂದು ನಿತ್ಯ ಹಸುರಿನ ಶಂಕುಧಾರಿ ಮರ (ಸಿಲ್ವರ್ ಫರ್).  ಇದರ ವೈಜ್ಞಾನಿಕ ಹೆಸರು ಏಬೀಸ್ ವೆಬ್ಬಿಯಾನ, ಇದರ ಒಣಗಿದ ಎಲೆಗಳಿಗೂ ತಾಳೇಶಪತ್ರೆ ಎಂಬ ಹೆಸರೇ ಉಂಟು.  ಬ್ರಿಟನ್ನಿನ ಮೂಲವಾಸಿಯಾದ ಇದು ಸಮಶೀತೋಷ್ಣ ವಲಯದ ಪರ್ವತ ಶ್ರೇಣಿಗಳಲ್ಲೂ ಭಾರತದ ಹಿಮಾಲಯ ಮತ್ತು ಅಫ್ಫಾನಿಸ್ತಾನದ ಪರ್ವತಗಳಲ್ಲೂ ಬೆಳೆಯುತ್ತದೆ.  2100-4000 m ಎತ್ತರದ ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆಯುವುದು.  ಸುಮಾರು 70ಮೀ ಎತ್ತರಕ್ಕೆ ಬೆಳೆಯುವ ಭೂರಿ ಗಾತ್ರದ ಮರ ಇದು.  ಇದರ ಎಲೆ ಚಪ್ಪಟೆಯಾದ ಸೂಜಿಯಂತಿದೆ.  ಉದ್ದ 1.3-2.5ಛಿm.   ಎಳೆಯ ರೆಂಬೆಗಳ ಮೇಲೆ ಮೃದುವಾದ ಕೆಂಪು ತುಪ್ಪುಳಿನ ಹೊದಿಕೆಯುಂಟು.  ಇದರ ಶಂಕುಗಳು ಬಿಡಿಯಾಗಿಯೊ ಗುಂಪಾಗಿಯೊ ಇದ್ದು  ರೆಂಬೆಯ ಒಂದು ಪಕ್ಕಕ್ಕೆ ಅಂಟಿಕೊಂಡಿವೆ.  ಎಳೆಯವಾಗಿದ್ದಾಗ ಇವುಗಳ ಬಣ್ಣ ಅಚ್ಚನೀಲಿ.  ಶಂಕುವಿನ ಪ್ರತಿಯೊಂದು ಎಲೆಯ ಮೇಲೆ ಊಧ್ರ್ವಮುಖವಾಗಿ ಅಂಟಿಕೊಂಡಿರುವ ಅಂಡಕಗಳುಂಟು.  ಇದರ ಚೌಬೀನ ಹೊಸದಾಗಿ ಕತ್ತರಿಸಿದಾಗ ಬಿಳುಪಾಗಿದ್ದು ಕ್ರಮೇಣ ಮಬ್ಬಾಗಿರುತ್ತದೆ.  ಇದು ಬಹಳ ಹಗುರ ಬಗೆಯದು.  ಸುಲಭವಾಗಿ ಕೊಯ್ಯಬಹುದಾದರೂ ಬಹಳ ಕಾಲ ಬಾಲಿಕೆ ಬರುವುದಿಲ್ಲ.  ಅಲ್ಲದೆ ಇದರಲ್ಲಿ ರಾಳಕೋಶಗಳು ಇಲ್ಲದಿರುವುದರಿಂದ ಬಲುಬೇಗ ಬೂಷ್ಟು ಮತ್ತು ಕೀಟಗಳಿಗೆ ಬಲಿಯಾಗುವುದು.  ಆದರೂ ಕೆಲವು ರಾಸಾಯನಿಕಗಳ ಬಳಕೆಯಿಂದ ಹೆಚ್ಚು ಕಾಲ ಕೆಡದಂತೆ ರಕ್ಷಿಸಿ ಇಡಬಹುದು.  ಇದರಿಂದಾಗಿ ಇದನ್ನು ಹಲವಾರು ಕಾರ್ಯಗಳಿಗೆ ಬಳಸುವುದುಂಟು.

ಹಣ್ಣು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಡುವ ಹಗುರ ಪೆಟ್ಟಿಗೆ, ಮೇಲ್ಭಾವಣಿ ಹಲಗೆ, ಮರ-ಹಂಚುಗಳು, ನೀರಿನ ತೊಟ್ಟಿಗಳು, ಲಘು ಪೀಠೋಪಕರಣಗಳು ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.  ರೈಲ್ವೆ ಸ್ಲೀಪರುಗಳು, ಪೆನ್ಸಿಲ್  ಕಾಗದಗಳ ತಯಾರಿಕೆಗೂ ಇದನ್ನು ಬಳಸುವುದು ಉಂಟು.  ತಾಳೇಶಪತ್ರೆಯ ತೊಗಟೆಯಲ್ಲಿ ಒಂದು ತೆರನ ರಾಳದಂಥ ಟರ್ಪಂಟೈನ್ ಉಂಟು. ಇದನ್ನು ಹೊರತೆಗೆದು ಉತ್ತಮ ದರ್ಜೆಯ ಬಣ್ಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.  ಅಲ್ಲದೆ ಮರದಿಂದ ಬಿಳಿಯ ಬಣ್ಣದ ರಾಳವನ್ನೂ ಪಡೆಯಬಹುದಾಗಿದ್ದು ಹಲವು ಬಗೆಯ ಔಷಧಿಗಳ ತಯಾರಿಯಲ್ಲಿ ಬಳಕೆಯಾಗುತ್ತದೆ.  ಈ ಮರದ ಎಳೆಯ ಶಂಕುಗಳಿಂದ ನೇರಳೆ ಬಣ್ಣದ ವಸ್ತುಗಳನ್ನು ಪಡೆಯಬಹುದು.  ಇದಕ್ಕೆ ರಾಯ್ ಸುಳ್ಳ ಎಂಬ ಹೆಸರುಂಟು.  ಬಟ್ಟೆಗಳಿಗೆ ಬಣ್ಣಕೊಡಲು ಇದನ್ನು ಬಳಸುವರು.  ತಾಳೇಶಪತ್ರೆಗೆ (ಒಣಗಿದ ಎಲೆ ಮತ್ತು ಎಲೆಯಿಂದ ತುಂಬಿದ ಎಳೆ ರೆಂಬೆಗಳು) ಮಹತ್ತರವಾದ ವೈದ್ಯಕೀಯ ಗುಣಗಳಿವೆ.  ಒಣಗಿದ ಎಲೆಗಳು ವಾಯುಹರ, ಕಫಹಾರಿ, ಜಠರೋತ್ತೇಜಕ ಮತ್ತು ಬಲವರ್ಧಕ ಎಂದು ಹೆಸರಾಗಿವೆ. ದಮ್ಮು, ಕೆಮ್ಮು, ಕ್ಷಯಸಂಬಂಧ ರೋಗ, ಬ್ರಾಂಕೈಟಿಸ್ ಮತ್ತು ಶೀತರೋಗ ನಿವಾರಣೆ ಇದನ್ನು ಬಳಸುತ್ತಾರೆ.  ಅಲ್ಲದೆ ಎಲೆಗಳನ್ನು ಮೆಣಸು, ಶುಂಟಿ, ಏಲಕ್ಕಿ ದಾಲ್ಚಿನ್ನಿ ಮತ್ತು ಸಕ್ಕರೆಯೊಂದಿಗೆ ಸೇರಿಸಿ ಒಂದು ಚೂರ್ಣವನ್ನು ತಯಾರಿಸುತ್ತಾರೆ. ಇದೇ ತಾಳೇಶ ಚೂರ್ಣ. ಇದರ ಬಳಕೆಯೂ ತಾಳೇಶಪತ್ರೆಯಂತೆಯೇ. ಕೆಲವೆಡೆ ತಾಳೇಶಪತ್ರೆಯ ಎಲೆ ಮತ್ತು ರೆಂಬೆಗಳನ್ನು ದನಗಳ ಮೇವಾಗಿ ಬಳಸುವುದಿದೆ.
(ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ